ನ್ಯಾಯಾಲಯದಲ್ಲಿ ಎತ್ತರದ ಧ್ವನಿ – ಮುಖ್ಯ ನ್ಯಾಯಮೂರ್ತಿಗಳ ಎಚ್ಚರಿಕೆ
ನವದೆಹಲಿ: ನ್ಯಾಯಾಲಯದಲ್ಲಿ ವಕೀಲರೊಬ್ಬರು ಎತ್ತರದ ಧ್ವನಿಯಲ್ಲಿ ಮಾತಾಡಿದ್ದನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ತೀವ್ರವಾಗಿ ಆಕ್ಷೇಪಿಸಿ ಎಚ್ಚರಿಸಿದ ಪ್ರಸಂಗ ಬುಧವಾರ ನಡೆಯಿತು.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಅರ್ಜಿಯೊಂದನ್ನು ಪಟ್ಟಿ ಮಾಡುವ ಕುರಿತು ವಾಗ್ವಾದದ ವೇಳೆ ವಕೀಲರೊಬ್ಬರಿಗೆ ಈ ಎಚ್ಚರಿಕೆ ನೀಡಿದರು. ಗೌರವಾನ್ವಿತವಾಗಿ ವರ್ತಿಸುವಂತೆ ಈ ವಕೀಲರಿಗೆ ತಾಕೀತು ಮಾಡಿದರು. ನಿಮ್ಮ ಧ್ವನಿಯನ್ನು ತಗ್ಗಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ನ್ಯಾಯಾಲಯದಿಂದ ಹೊರ ಹಾಕಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಈ ವಕೀಲರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನೀಡಿದರು.
ಧ್ವನಿಯನ್ನು ಎತ್ತರಿಸಿ ನ್ಯಾಯಾಲಯವನ್ನು ದಬಾಯಿಸಬಹುದು ಎಂದು ನೀವು ತಿಳಿದಿದ್ದರೆ ಅದು ತಪ್ಪು. ನನ್ನ ವೃತ್ತಿ ಜೀವನದಲ್ಲಿ ಎಂದೂ ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಮುಂದೆಯೂ ಇದು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೇಳಿದರು.
ಮುಖ್ಯ ನ್ಯಾಯಮೂರ್ತಿಗಳ ಎಚ್ಚರಿಕೆ ನಂತರ ಈ ವಕೀಲರು ತಕ್ಷಣವೇ ಕ್ಷಮೆ ಯಾಚಿಸಿದರು.
&&&&&&&&&&&&&&&&&&&&&&&&&&&&&&&&&&&&
ಸುಪ್ರೀಂ ಕೋರ್ಟ್ ತೀರ್ಪು-ಅದಾನಿ ನಿರಾಳ
ನವದೆಹಲಿ: ಹಿಂಡನ್ಬರ್ಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಬುಧವಾರ ನೀಡಿರುವ ಆದೇಶ ಅದಾನಿ ಗ್ರೂಪ್ಗೆ ನಿರಾಳತೆಯನ್ನು ತಂದಿದೆ.
ಅದಾನಿ ಗ್ರೂಪ್ ತನ್ನ ಷೇರುಗಳ ಬೆಲೆಯನ್ನು ಕೃತಕವಾಗಿ ಏರಿಕೆ ಮಾಡಿಕೊಂಡಿದೆ. ಈ ಕುರಿತು ಆರೋಪದ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕೆಂದು ನ್ಯಾಯಾಲಯವನ್ನು ಕೋರಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಪೀಠವು ಸೆಬಿ ತನಿಖೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಸೆಬಿ ತನಿಖೆಯಲ್ಲಿ ಲೋಪವಾಗಿದೆ ಎಂದು ಹೇಳಲು ಯಾವುದೇ ಆಧಾರವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮೂರು ತಿಂಗಳ ಒಳಗಾಗಿ ಬಾಕಿ ಉಳಿದಿರುವ ಎರಡು ಪ್ರಕರಣಗಳ ತನಿಖೆ ಪೂರ್ಣಗೊಳಿಸಬೇಕೆಂದು ಸೆಬಿಗೆ ಸುಪ್ರೀಂಕೋಟ್ ಸೂಚಿಸಿದೆ.
ಹಿಂಡನ್ಬರ್ಗ್ ಕಾನೂನು ಉಲ್ಲಂಘಿಸಿದ್ದರೆ ಸರಕಾರ ಮತ್ತು ಸೆಬಿ ತನಿಖೆ ನಡೆಸಲಿ. ಈ ಪ್ರಕರಣದಲ್ಲಿ ಸೆಬಿ ಕ್ರಮ ಕೈಗೊಳ್ಳಲು ನಿರ್ಲಕ್ಷಿಸಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಆಧಾರವಿಲ್ಲ. ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಿ ಎಂದು ಸುಪ್ರಿಂಕೋರ್ಟ್ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ