15/01/2025

Law Guide Kannada

Online Guide

ಅತ್ಯಾಚಾರದಿಂದ ಜನಿಸಿದ ಮಗು ದತ್ತುಗೆ ತಂದೆ ಒಪ್ಪಿಗೆ ಅಗತ್ಯವಿಲ್ಲ- ಹೈಕೋರ್ಟ್

ಬೆಂಗಳೂರು: ಅತ್ಯಾಚಾರದಿಂದ ಜನಿಸಿದ ಮಗುವನ್ನು ದತ್ತು ನೀಡಲು ಮಗುವಿನ ತಂದೆಗೆ (ಜೈವಿಕ ತಂದೆ) ಒಪ್ಪಿಗೆ ಅಗತ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅತ್ಯಾಚಾರದಿಂದ ಜನಿಸಿದ ಮಗುವನ್ನು ದತ್ತು ನೀಡಲು ತಂದೆ ಒಪ್ಪಿಗೆ ಪಡೆಯದ ಕಾರಣ ಅರ್ಜಿ ಆಪೂರ್ಣ ವಾಗಿದೆ ಎಂದು ಉಪ ನೋಂದಣಾಧಿಕಾರಿ ಹಿಂಬರಹ ನೀಡಿದ್ದರು.

ಉಪನೋಂದಣಾಧಿಕಾರಿಯ ಹಿಂಬರಹ ರದ್ದತಿಗೆ ಕೋರಿ ಮಗುವಿನ ತಾಯಿ(ಸಂತ್ರಸ್ತೆ), ಆಕೆಯ ತಾಯಿ ಹಾಗೂ ದತ್ತು ಪಡೆಯಲು ಬಯಸಿರುವ ದಂಪತಿ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ನ್ಯಾ। ಹೇಮಂತ್ ಚಂದನ ಗೌಡರ್ ಪೀಠ, ಅತ್ಯಾಚಾರದಿಂದ ಜನಿಸಿದ ಮಗುವನ್ನು ದತ್ತು ನೀಡಲು ತಂದೆಯ ಒಪ್ಪಿಗೆ ಇಲ್ಲದ ಕಾರಣ ದತ್ತುಪತ್ರದ ನೋಂದಣಿಗೆ ನಿರಾಕರಿಸಿ ಉಪನೋಂದಣಾಧಿಕಾರಿ ನೀಡಿದ್ದ ಹಿಂಬರಹ ರದ್ದುಪಡಿಸಿತು. ಮಗುವಿನ ತಂದೆಯ ಒಪ್ಪಿಗೆ ಪಡೆಯುವಂತೆ ತಾಯಿ, ಪೋಷಕರಿಗೆ ಸೂಚಿಸದೆ ದತ್ತು ಪತ್ರವನ್ನು ನೋಂದಣಿ ಮಾಡಬೇಕು ಎಂದು ಉಪ ನೋಂದಣಾಧಿಕಾರಿಗೆ ನಿರ್ದೇಶಿಸಿತು. ನೋಂದಣಿ ನಂತರ ದತ್ತು ಪಡೆದ ದಂಪತಿ ಜಿಲ್ಲಾ ದಂಡಾಧಿಕಾರಿಗೆ ವರದಿ ಸಲ್ಲಿಸಬೇಕು. ಅವರು ಪ್ರಕರಣದ ಕುರಿತ ವರದಿಯನ್ನು ಬಾಲನ್ಯಾಯ ಕಾಯ್ದೆ ಸೆಕ್ಷನ್ 46 ಹೇಳುವಂತೆ ಸೆಂಟ್ರಲ್ ಆಡಾಪ್ಷನ್ ರಿಸೋರ್ಸ್ ಆಥಾರಿಟಿಗೆ(ಸಿಎಆರ್‌ಎ) ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶಿಸಿತು.

ಪ್ರಕರಣದ ಹಿನ್ನೆಲೆ..
2023ರಲ್ಲಿ ಬೆಂಗಳೂರಿನ ಅಪ್ರಾಪ್ತ ಬಾಲಕಿಯ (ಸಂತ್ರಸ್ತೆ) ಮೇಲೆ ವ್ಯಕ್ತಿಯೋಬ್ಬ ಅತ್ಯಾಚಾರವೆಸಗಿದ್ದ. 2024ರ ಆಗಸ್ಟ್ ನಲ್ಲಿ ಈ ಬಗ್ಗೆ ಎಫ್ ಐಆರ್ ದಾಖಲಾಗಿತ್ತು. ಅತ್ಯಾಚಾರ, ಪೋಕೋ ಪ್ರಕರಣದಡಿ ಆರೋಪಿ ಬಂಧನಕ್ಕೆ ಒಳಗಾಗಿ ಸದ್ಯ ಜೈಲಿನಲ್ಲಿದ್ದಾನೆ. ಈ ಮಧ್ಯೆ 2024ರ ಸೆಪ್ಟೆಂಬರ್‌ ನಲ್ಲಿ ಸಂತ್ರಸ್ತೆಗೆ ಹೆಣ್ಣು ಮಗು ಜನಿಸಿತ್ತು.

ಸಂತ್ರಸ್ತೆಯ ಕುಟುಂಬದಲ್ಲಿ 3 ಮಹಿಳಾ ಸದಸ್ಯರಿದ್ದು, ಆದಾಯ ಗಳಿಸುವ ಪುರುಷ ಇಲ್ಲ, ಇದರಿಂದ ಮಗುವಿನ ಸಮಗ್ರ ಬೆಳವಣಿಗೆಗೆ ಮತ್ತು ಉತ್ತಮ ಆರೈಕೆ ಸಾಧ್ಯವಿಲ್ಲದ ಕಾರಣ ಅದನ್ನು ದತ್ತು ನೀಡಲು ನಿರ್ಧರಿಸಿದ್ದರು. ಮಕ್ಕಳಿಲ್ಲದ ದಂಪತಿ ಅದನ್ನು ದತ್ತು ಪಡೆಯಲು ಒಪ್ಪಿತ್ತು.

ಅದರಂತೆ ಮತ್ತು ಪತ್ರದ ನೋಂದಣಿಗೆ ಕೋರಿ 2024ರ ನ.11ರಂದು ಸಲ್ಲಿಸಿದ್ದ ಅರ್ಜಿಯನ್ನು, ತಂದೆ ಒಪ್ಪಿಗೆ ಪಡೆಯದ ಕಾರಣ ಅರ್ಜಿ ಆಪೂರ್ಣ ವಾಗಿದೆ ಎಂದು ಉಪ ನೋಂದಣಾಧಿಕಾರಿ ಹಿಂಬರಹ ನೀಡಿದ್ದರು. ಮತ್ತು ಪತ್ರವನ್ನು ನೋಂದಣಿ ಮಾಡಲು ಉಪ ನೋಂದಣಾಧಿಕಾರಿಗೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಮಗುವಿನ ತಾಯಿ ಮತ್ತು ದತ್ತು ಪಡೆಯಲು ಬಂದಿರುವ ದಂಪತಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಅವರಿಗೆ ಬಾಲ ನ್ಯಾಯ ಕಾಯ್ದೆ 2015ರ ನಿಯಮಗಳು ಅನ್ವಯಿಸುತ್ತದೆ. ಅವರ ಪ್ರಕಾರ ಮಗುವಿನ ಪೋಷಕರು ದತ್ತು ನೀಡುವ ಹಕ್ಕು ಹೊಂದಿರುತ್ತಾರೆ. ದತ್ತು ನಿಬಂಧನೆಗಳು-2017ರ ನಿಬಂಧನೆ 7(7) ಪ್ರಕಾರ ಅತ್ಯಾಚಾರದಂತಹ ಕೃತ್ಯದಿಂದ ಜನಿಸಿದ ಮಗುವನ್ನು ದತ್ತು ನೀಡಲು ತಾಯಿ ಅಧಿಕಾರ/ಹಕ್ಕು ಹೊಂದಿರುತ್ತಾರೆ. ಅದರಲ್ಲೂ ತಾಯಿ ಅಪ್ರಾಪ್ತ ಯಾಗಿದ್ದರೆ ದತ್ತು ಪತ್ರಕ್ಕೆ ಪ್ರಾಪ್ತ ಸಾಕ್ಷಿಯೊಬ್ಬರು ಸಹಿ ಹಾಕಬೇಕು ಎಂದು ತಿಳಿಸಿದೆ.

ಅಂತಿಮವಾಗಿ, ಸಂತ್ರಸ್ತೆ ಹಾಗೂ ಆಕೆಯ ತಾಯಿ ದತ್ತು ಪತ್ರಕ್ಕೆ ಜಂಟಿಯಾಗಿ ಸಹಿ ಹಾಕಿ ದ್ದಾರೆ. ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 63 ಹೇಳುವಂತೆ ಮಗುವಿನ ಪೋಷಕರು ಹಾಗೂ ದತ್ತು ಪಡೆಯುತ್ತಿರುವ ದಂಪತಿ ನಡುವೆ ಕಾನೂನುಬದ್ಧ ದತ್ತು ಒಪ್ಪಂದ ಏರ್ಪಟ್ಟಿದೆ.

ಆದ್ದರಿಂದ ದತ್ತು ಪತ್ರಕ್ಕೆ ಅತ್ಯಾಚಾರ ಆರೋಪಿಯಾದ ಮಗುವಿನ ತಂದೆಯ ಒಪ್ಪಿಗೆ ಅಮುಖ್ಯ, ಅನಗತ್ಯ. ಅವರಂತೆ ಮಗುವಿನ ಮತ್ತು ಪತ್ರವು ಬಾಲ ನ್ಯಾಯ ಕಾಯ್ದೆ ಹಾಗೂ ದತ್ತು ನಿಬಂಧನೆಗಳ ಆಡಿಯ ನಿಯಮಗಳನ್ನು ಪಾಲಿಸಿದಂತಾಗಿದ್ದು, ಮಗುವಿನ ತಂದೆಯ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.