26/12/2024

Law Guide Kannada

Online Guide

ಎಸ್ಸಿ, ಎಸ್ಟಿ ಜಮೀನು ಮಾರಾಟದ ಬಳಿಕ ಹಕ್ಕು ಮರುಸ್ಥಾಪನೆ ಸಾಧ್ಯವಿಲ್ಲ – ಹೈಕೋರ್ಟ್

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಮಿ ವರ್ಗಾವಣೆ ನಿಷೇಧ (ಕೆಲವು ಭೂಮಿಗಳ ಪರಭಾರೆ ನಿಷೇಧ) (ಪಿಟಿಸಿಎಲ್) ಕಾಯ್ದೆಯಡಿ ಮಂಜೂರಾಗಿದ್ದ ಜಮೀನನ್ನು ಮಾರಾಟ ಮಾಡಿದ 12 ವರ್ಷದ ಬಳಿಕ ಆ ಜಮೀನಿನ ಮೇಲಿನ ಹಕ್ಕುಗಳ ಮರುಸ್ಥಾಪನೆ ಮಾಡಲಾಗದು ಎಂದು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಮಾರಾಟ ಮಾಡಿದ ಜಮೀನನ್ನು ಮರು ಸ್ಥಾಪಿಸಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ದಿವಂಗತ ಲಕ್ಷ್ಮಯ್ಯ ಎಂಬುವರ ಉತ್ತರಾಧಿಕಾರಿಗಳು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿದಾರರ ಪೂರ್ವಜರು ಜಮೀನು ಮಾರಾಟ ಮಾಡಿ 12 ವರ್ಷಗಳೇ ಕಳೆದಿದ್ದು, ಇದೀಗ ಆ ಜಮೀನು ಮತ್ತೊಬ್ಬರಿಗೆ ವರ್ಗಾವಣೆಯಾಗಿದೆ. ಇದನ್ನು ಅನೂರ್ಜಿತ ಎಂದು ಹೇಳುವುದು ಕಾನೂನಿಗೆ ವಿರುದ್ಧವಾದುದು ಎಂದು ನ್ಯಾಯಪೀಠ ಹೇಳಿದೆ.

ರಾಜ್ಯ ಸರ್ಕಾರ ಪಿಟಿಸಿಎಲ್ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ಮಾಡಿದ್ದು, ಕಲಂ 5ಕ್ಕೆ ಸಿ ಮತ್ತು ಡಿ ಉಪ ಕಲಂಗಳನ್ನು ಸೇರಿಸಿದೆ. ಅವುಗಳಂತೆ ಸರ್ಕಾರದಿಂದ ಪರಿಶಿಷ್ಟ ಜಾತಿಯವರಿಗೆ ಮಂಜೂರಾದ ಜಮೀನನ್ನು ಮಾರಾಟದ ಬಳಿಕ ಹಿಂಪಡೆಯಲು ಕಾಲಾವಧಿಯ ಮಿತಿ ಇರುವುದಿಲ್ಲ. ಈ ನಿಯಮ ಎಸಿ ಮತ್ತು ಡಿಸಿ ಹಾಗೂ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಿಗೆ ಅನ್ವಯಿಸಲಿದೆ ಎಂಬುದಾಗಿ ತಿಳಿಸಲಾಗಿತ್ತು. ಆದರೆ ಈ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿದ್ದು, ಅರ್ಜಿ ವಿಚಾರಣಾ ಹಂತದಲ್ಲಿದೆ. ಈ ಸಂದರ್ಭದಲ್ಲಿ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.