ಗಂಡನ ಮನೆಯಲ್ಲಿದ್ದೇ 2ನೇ ಮದುವೆಗೆ ಪತ್ನಿ ಯತ್ನ: ವಿಚ್ಚೇದನ ಮಂಜೂರು: ಮಧ್ಯಪ್ರವೇಶಿಸಿಸಲು ಹೈಕೋರ್ಟ್ ನಕಾರ
ಬೆಂಗಳೂರು: ಮದುವೆಯಾಗಿ ಗಂಡನ ಜೊತೆ ಸಹಬಾಳ್ವೆಯಿಂದ ಜೀವನ ನಡೆಸಬೇಕಾಗಿದ್ದ ಹೆಂಡತಿಯು ಪತಿಯ ಜತೆಯಲ್ಲಿದ್ದುಕೊಂಡೇ 2ನೇ ಮದುವೆಗೆ ಯತ್ನಿಸಿ ಗಂಡನೊಂದಿಗೆ ವೈವಾಹಿಕ ಸಂಬಂಧ ಬೆಳೆಸಲು ನಿರಾಕರಿಸಿದ ಮಹಿಳೆಗೆ ಹೈಕೋರ್ಟ್ ವಿಚ್ಚೇದನ ಮಂಜೂರು ಮಾಡಲು ಸಮ್ಮತಿ ಸೂಚಿಸಿದೆ.
ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನ ಪ್ರಶ್ನಿಸಿ ಬೆಂಗಳೂರಿನ ವಿಜಯನಗರದ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಉಮೇಶ್ ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ವಿವಾಹವಾದ ಬಳಿಕ ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಪತ್ನಿಯ ತಂದೆ ಸಾವನ್ನಪ್ಪಿದ್ದು, ಪರಿಣಾಮ, ನಿನ್ನನ್ನು ಮದುವೆಯಾದ ಕಾರಣದಿಂದಲೇ ನಮ್ಮ ಕುಟುಂಬಕ್ಕೆ ದುರದೃಷ್ಟ ಎದುರಾಗಿದೆ. ಹೀಗಾಗಿ ನಮ್ಮ ತಂದೆ ಸಾವಿಗೀಡಾದ್ದಾರೆ ಎಂದು ಪತಿಯ ವಿರುದ್ದ ಪತ್ನಿ ಆರೋಪಿಸಿ ಅನುಮಾನ ಪಡುತ್ತಿದ್ದ ಅಂಶಗಳನ್ನು ಪರಿಗಣಿಸಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ ಈ ಆದೇಶದಲ್ಲಿ ಮಧ್ಯ ಪ್ರವೇಶಕ್ಕೆ ಹೈಕೋರ್ಟ್ ನಿರಾಕರಿಸಿದೆ.
ಈ ಪ್ರಕರಣದಲ್ಲಿ 2018ರ ಜುಲೈನಿಂದ 2019ರ ನವೆಂಬರ್ ವರೆಗೆ ಪತ್ನಿ ಕಳುಹಿಸಿರುವ ವಾಟ್ಸ್ ಆ್ಯಪ್ ಸಂದೇಶಗಳನ್ನು ಪತಿ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಸಂದೇಶಗಳು ಬರೋಬ್ಬರಿ 127 ಪುಟಗಳಷ್ಟಿದೆ. ಪತಿಯೊಂದಿಗೆ ಜೀವನ ನಡೆಸಲು ಪತ್ನಿಗೆ ಇಚ್ಛೆಯಿಲ್ಲ ಎಂಬುದು ಆಕೆಯ ಸಂದೇಶಗಳಿಂದ ಸ್ಪಷ್ಟವಾಗುತ್ತದೆ. ಒಂದಲ್ಲಾ ಒಂದು ಕಾರಣಕ್ಕೆ ಪತಿ, ಆತನ ಪೋಷಕರು ಮತ್ತು ಹತ್ತಿರದ ಸಂಬಂಧಿಕರನ್ನು ಪತ್ನಿ ದೂರುತ್ತಿದ್ದರು. ಜತೆಗೆ, ತನ್ನ ಕನಸುಗಳನ್ನು ಪತಿ ಕೊಂದಿದ್ದಾರೆ. ವಿಚ್ಛೇದನ ನೀಡಿದರೆ ಇಬ್ಬರು ಸಂತೋಷದಿಂದ ಬದುಕಬಹುದು ಎಂದು ಪತ್ನಿ ಹೇಳಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಹಾಗೆಯೇ, ತನ್ನ ಅಂತಸ್ತಿಗೆ ತಕ್ಕಂತೆ ಆರತಕ್ಷತೆ ಮಾಡಿ ಕೊಟ್ಟಿಲ್ಲ ಎಂದು ಮುನಿಸಿಕೊಂಡು ಮದುವೆಯಾಗಿ 7 ವರ್ಷ ಕಳೆದರೂ ವೈವಾಹಿಕ ಜೀವನಕ್ಕೆ ಒಪ್ಪದೇ ದೈಹಿಕ ಹಲ್ಲೆಮಾಡಿ, ಮಾನಸಿಕ ಹಿಂಸೆ ನೀಡಿದ್ದರು . ವಿನಾಕಾರಣ ದೂಷಿಸುತ್ತಾ ಬೆಡ್ ರೂಂನಲ್ಲಿ ಪತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಬೇರೊಬ್ಬ ನನ್ನು ವಿವಾಹವಾಗಲು ವಿಚ್ಚೇದನ ನೀಡುವುದು ಸೇರಿದಂತೆ ವಿವಿಧ ರೀತಿಯಲ್ಲಿ 127 ಪುಟಗಳಾಗು ವಷ್ಟು ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದರು.
ಅಂತಿಮವಾಗಿ ಪತ್ನಿಯ ಈ ಎಲ್ಲ ಸಂದೇಶಗಳನ್ನು ನೋಡಿದರೆ, ವೈವಾಹಿಕ ಜೀವನ ನಡೆಸಲು ಆಕೆಗೆ ಆಸಕ್ತಿ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅಲ್ಲದೆ, 2017ರಲ್ಲಿ ವೈವಾಹಿಕ ಜೀವನ ನಡೆಸಲು ಪತ್ನಿ ಅವಕಾಶವೇ ನೀಡಿಲ್ಲ. ಇದೀಗ, ಪತಿಗೆ ಕಿರುಕುಳ ನೀಡಲೆಂದೇ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬುದು ತಿಳಿಯುತ್ತಿದೆ. ಆದ್ದರಿಂದ ಕೌಟುಂಬಿಕ ನ್ಯಾಯಾಲಯ ವಿವಾಹ ವಿಚ್ಚೇದನ ಮಂಜೂರು ಮಾಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ