ಭಾರತದ ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಸುನಿತಾ ಅಗರವಾಲ್
ಭಾರತದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿ ನಿನ್ನೆ ಭಾನುವಾರ ಜು.23 ಐತಿಹಾಸಿಕ ದಿನ. ಗುಜರಾತ್ ಹೈಕೋರ್ಟ್‌ನ 29ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಸುನಿತಾ ಅಗರವಾಲ್ ಪ್ರಮಾಣ ಸ್ವೀಕರಿಸಿದರು. ಈ ಮೂಲಕ ಸದ್ಯ ಭಾರತದಲ್ಲಿರುವ ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಕೀರ್ತಿಗೆ ಅವರು ಭಾಜನರಾದರು. ಗುಜರಾತ್ ಹೈಕೋರ್ಟ್‌ನ ಮಟ್ಟಿಗೆ ಅವರು ಎರಡನೇ ಮಹಿಳಾ ಮುಖ್ಯ ನ್ಯಾಯಮೂರ್ತಿ.
ಗುಜರಾತ್‌ನ ಗಾಂಧಿನಗರದಲ್ಲಿರುವ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಸ್ಟೀಸ್ ಸುನಿತಾ ಅಗರವಾಲ್ ಅವರಿಗೆ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಪ್ರಮಾಣ ಬೋಧಿಸಿದರು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗುಜರಾತ್ ವಿಧಾನಸಭೆಯ ಸ್ಪೀಕರ್ ಶಂಕರ್ ಚೌಧರಿ, ಕಾನೂನು ಸಚಿವ ಋಷಿಕೇಶ್ ಪಟೇಲ್ ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದರು.
ಸುಪ್ರೀಂ ಕೋರ್ಟ್ ಕೊಲಿಜಿಯಂ ಜಸ್ಟೀಸ್ ಸುನಿತಾ ಅಗರವಾಲ್ ಅವರನ್ನು ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸುವ ಪ್ರಸ್ತಾವನೆಯನ್ನು ಜುಲೈ 5ರಂದು ಸಲ್ಲಿಸಿತ್ತು. ಸದ್ಯ ದೇಶದಲ್ಲಿರುವ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಪೈಕಿ ಯಾರೂ ಮಹಿಳೆಯರಿಲ್ಲ. ಈ ನೇಮಕಾತಿ ಆದರೆ ಇವರು ಏಕೈಕ ಮಹಿಳಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿತ್ತು.
ಗುಜರಾತ್ ಹೈಕೋರ್ಟ್‌ನಲ್ಲಿ ಜಸ್ಟೀಸ್ ಸುನಿತಾ ಅಗರವಾಲ್ ಅವರಿಗಿಂತ ಮೊದಲು ಇದ್ದ ಮಹಿಳಾ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಸೋನಿಯಾ ಗೋಕಣಿ. ಅವರು 2023ರ ಫೆಬ್ರವರಿ 25ರಂದು ನಿವೃತ್ತರಾದರು. ಆ ಬಳಿಕ ಜಸ್ಟೀಸ್ ಎಜೆ ದೇಸಾಯಿ ಅವರು ಗುಜರಾತ್ ಹೈಕೋರ್ಟ್‌ನ ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದರು.
ಜಸ್ಟೀಸ್ ಸುನಿತಾ ಅಗರವಾಲ್ ಯಾರು?
ನ್ಯಾಯಮೂರ್ತಿ ಸುನಿತಾ ಅಗರವಾಲ್ ಅವರ ವೃತ್ತಿಬದುಕು, ನ್ಯಾಯಾಂಗ ವ್ಯವಸ್ಥೆಯಲ್ಲಿ ಅವರ ಸಾಧನೆಯ ಕಾನೂನು ಪ್ರಯಾಣವು ಅನೇಕ ಮಹಿಳಾ ವಕೀಲರಿಗೆ ಸ್ಫೂರ್ತಿಯಾಗಿದೆ. ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಅಗರವಾಲ್ ಅವರ ನೇಮಕವು ಹಲವರಿಗೆ ಪ್ರೇರಣೆಯಾಗಲಿದೆ. ಅಂತಹ ಪ್ರೇರಣೆಯ ಮಾತುಗಳನ್ನು ಅವರಾಡಿದ್ದಾರೆ.
ಜಸ್ಟೀಸ್ ಸುನಿತಾ ಅಗರವಾಲ್ ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಮಾಹಿತಿ ಆನ್‌ಲೈನ್ ಪ್ಲಾಟ್‌ಫಾರಂಗಳಲ್ಲಿ ಲಭ್ಯವಿಲ್ಲ. ಅಲಹಾಬಾದ್ ಹೈಕೋರ್ಟ್ ವೆಬ್‌ಸೈಟ್‌ನಲ್ಲಿರುವ ಅವರ ಪರಿಚಯ ಮಾಹಿತಿ ಪ್ರಕಾರ, ಜಸ್ಟೀಸ್ ಸುನಿತಾ ಅಗರವಾಲ್ ಹುಟ್ಟಿದ್ದು 1966ರ ಏಪ್ರಿಲ್ 30ರಂದು.
ಇನ್ನು ಜಸ್ಟೀಸ್ ಸುನಿತಾ ಅಗರವಾಲ್ ಅವರ ಶಿಕ್ಷಣದ ವಿಚಾರಕ್ಕೆ ಬಂದರೆ, ಅವಧ ವಿಶ್ವವಿದ್ಯಾಲಯದಲ್ಲಿ 1989ರಲ್ಲಿ ಕಾನೂನು ಪದವಿ ಪಡೆದರು. 1990ರ ಡಿಸೆಂಬರ್ 16ರಂದು ಅಡ್ವೋಕೇಟ್ ಆಗಿ ನೋಂದಾಯಿಸಿಕೊಂಡು ವಕೀಲಿಕೆ ಶುರುಮಾಡಿದರು. ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಿವಿಲ್ ವ್ಯಾಜ್ಯಗಳ ವಕೀಲಿಕೆ ಮಾಡಿದರು.
ಜಸ್ಟೀಸ್ ಸುನಿತಾ ಅಗರವಾಲ್ ಅವರ ವೃತ್ತಿ ಬದುಕಿನ ಮೈಲಿಗಲ್ಲುಗಳು
ಅಲಹಾಬಾದ್ ಹೈಕೋರ್ಟ್‌ನಲ್ಲಿ ವಕೀಲಿಕೆ ಮಾಡುತ್ತಿದ್ದ ಸುನಿತಾ ಅಗರವಾಲ್ ಅವರನ್ನು 2011ರ ನವೆಂಬರ್ 21ರಂದು ಹೆಚ್ಚುವರಿ ಜಡ್ಜ್ ಆಗಿ ಎಲಿವೇಟ್ ಮಾಡಲಾಗಿತ್ತು. ಅದಾದ ಬಳಿಕ ಅವರು 2013ರ ಆಗಸ್ಟ್ 6ರಂದು ಅಲಹಾಬಾದ್ ಹೈಕೋರ್ಟ್‌ನ ಖಾಯಂ ಜಡ್ಜ್ ಆಗಿ ಪ್ರಮಾಣ ಸ್ವೀಕರಿಸಿದರು ಎಂಬುದು ಗುಜರಾತ್ ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಆಗಿರುವ ಅವರ ಪ್ರೊಫೈಲ್‌ನಲ್ಲಿದೆ.
ಕುಟುಂಬದ ಹೊಣೆಗಾರಿಕೆಯ ಹೊರತಾಗಿಯೂ ಕಚೇರಿಯಲ್ಲಿ ಸುದೀರ್ಘವಾಗಿ ಕುಳಿತುಕೊಳ್ಳುವ ಮೂಲಕ ನ್ಯಾಯಾಲಯದ ಕೆಲಸಕ್ಕೆ ಆದ್ಯತೆ ನೀಡುವವರು ಮತ್ತು ತನ್ನ ವೈಯಕ್ತಿಕ ಕಾರ್ಯಕ್ರಮಗಳನ್ನು ಬದಿಗಿಟ್ಟು ಕೆಲಸ ಮಾಡುವವರು. ಬಹುತೇಕ ಪ್ರತಿದಿನ, ನ್ಯಾಯಾಲಯದ ಆವರಣದಿಂದ ಹೊರಹೋಗುವ ಕೊನೆಯ ವ್ಯಕ್ತಿ ಅವರಾಗಿರುತ್ತಿದ್ದರು. ಅವರು ಆಡಳಿತಾತ್ಮಕ ಸಮಿತಿಯ ಸದಸ್ಯರಾಗಿ ಉತ್ತಮ ಆಡಳಿತಾತ್ಮಕ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬ ಅಂಶ ಲಾಟ್ರೆಂಡ್ ಇನ್ ಲೇಖನದಲ್ಲಿ ಉಲ್ಲೇಖವಿದೆ.
ಅಲಹಾಬಾದ್ ಹೈಕೋರ್ಟಿನ ನ್ಯಾಯವ್ಯಾಪ್ತಿಯಲ್ಲಿ ಗಮನಾರ್ಹವಾದ ತೀರ್ಪು ಸೇರಿದಂತೆ ಭಾರತೀಯ ಕಾನೂನಿನಲ್ಲಿ ಅವರು ಹಲವಾರು ಮಹತ್ವದ ತೀರ್ಪುಗಳನ್ನು ಬರೆದಿದ್ದಾರೆ.
2020 ರ ಝೆನ್ಹುವಾ ಡೇಟಾ ಸೋರಿಕೆಯು (Zhenhua Data Leak) ಚೀನಾದ ಡೇಟಾ ಅನಾಲಿಟಿಕ್ಸ್ ಕಂಪನಿಯ ಸಾಮೂಹಿಕ ಕಣ್ಗಾವಲಿಗೆ ಒಳಪಟ್ಟ 30 ಭಾರತೀಯ ನ್ಯಾಯಾಧೀಶರಲ್ಲಿ ಒಬ್ಬರು.
2018 ರಲ್ಲಿ, ಅಲಹಾಬಾದ್ ಹೈಕೋರ್ಟ್‌ನಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ದೂರುಗಳನ್ನು ಆಲಿಸಲು ನ್ಯಾಯಮೂರ್ತಿ ಅಗರವಾಲ್ ಮತ್ತು ಇನ್ನೊಬ್ಬ ನ್ಯಾಯಮೂರ್ತಿ ನಹೀದ್ ಅರಾ ಮೂನಿಸ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013 ರ ನಿಬಂಧನೆಗಳಿಗೆ ಅನುಗುಣವಾಗಿ ಸಮಿತಿಯನ್ನು ನೇಮಿಸಲಾಗಿತ್ತು.
ಮೇ 2020 ರಲ್ಲಿ, ಅವರು ಮತ್ತು ಇತರ ಇಬ್ಬರು ನ್ಯಾಯಾಧೀಶರು ಅಲಹಾಬಾದ್‌ನ ಉಚ್ಚ ನ್ಯಾಯಾಲಯವು ತಮ್ಮ ವ್ಯಾಪ್ತಿಯ ಹೊರಗೆ ವಾಸಿಸುವ ವ್ಯಕ್ತಿಗಳ ಮೇಲೆ ನ್ಯಾಯವ್ಯಾಪ್ತಿಯನ್ನು ಚಲಾಯಿಸಬಹುದು ಎಂಬ ತತ್ವವನ್ನು ಸ್ಥಿರೀಕರಿಸಿದರು. ಈ ಪ್ರಕರಣವು ಅವರ ಅಧಿಕಾರ ವ್ಯಾಪ್ತಿಯಲ್ಲಿ ನಡೆದ ಕ್ರಿಯೆಯ ಕಾರಣಕ್ಕೆ ಸಂಬಂಧಿಸಿದ್ದು.
ಈ ರೀತಿಯಾಗಿ ನ್ಯಾಯಾಧೀಶರಾಗಿ ಸುನಿತಾ ಅಗರವಾಲ್ ಅವರು ಭಾರತೀಯ ಸಾಂವಿಧಾನಿಕ ಕಾನೂನಿನಲ್ಲಿ ಹಲವಾರು ಮಹತ್ವದ ತೀರ್ಪುಗಳ ಸಹ-ಲೇಖಕರಾಗಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಅದರಲ್ಲೂ ನ್ಯಾಯಾಧೀಶರು, ನ್ಯಾಯಮೂರ್ತಿಗಳ ಸಂಪರ್ಕ ವಿವರ ಸಾರ್ವಜನಿಕ ಡೊಮೇನ್‌ಗಳಲ್ಲಿ ಲಭ್ಯವಿರುವುದಿಲ್ಲ. ಅವರು ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಅವರು ಸಾರ್ವಜನಿಕ ಸಂಪರ್ಕದಿಂದ ದೂರ ಇರುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಅವರು ಪ್ರಚಲಿತರಾಗಿರುವುದಿಲ್ಲ. ತಮ್ಮ ನಿಷ್ಪಕ್ಷಪಾತ ಕರ್ತವ್ಯ ನಿರ್ವಹಣೆ ಮೂಲಕವೇ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ.