24/12/2024

Law Guide Kannada

Online Guide

ಪ್ರಕರಣದ ವಿಚಾರಣೆ ವಿಳಂಬಕ್ಕೆ ವಕೀಲರ ಮೇಲೆ ಆರೋಪ ಹೊರಿಸುವಂತಿಲ್ಲ – ಸುಪ್ರೀಂಕೋರ್ಟ್

ನವದೆಹಲಿ : ಪ್ರಕರಣದ ವಿಚಾರಣೆ ವಿಳಂಬವಾದರೆ ಅದಕ್ಕೆ ಅವರ ವಕೀಲರ ಮೇಲೆ ಆರೋಪ ಹೊರಿಸುವಂತಿಲ್ಲ ಎಂದು ಸುಪ್ರೀಂ ತಿಳಿಸಿದೆ.

ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ದಾವೆದಾರರು ಜಾಗರೂಕರಾಗಿರಬೇಕು, ದಾವೆದಾರರು ಕೂಡ ತಮ್ಮ ಪ್ರಕರಣ ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸುವ ಜವಾಬ್ದಾರಿ ಹೊಂದಿದ್ದು ಪ್ರಕರಣದ ವಿಚಾರಣೆ ವಿಳಂಬವಾದರೆ ಅದಕ್ಕೆ ವಕೀಲರನ್ನು ದೂಷಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಏನಿದು ಪ್ರಕರಣ
ಪ್ರತಿವಾದಿ ಪರವಾಗಿ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಅರ್ಜಿದಾರ ಈ ಮೊದಲು ಮೇಲ್ಮನವಿ ನ್ಯಾಯಾಲಯದ ಮೊರೆ ಹೋಗಿದ್ದರು. ಮೊದಲ ಮೇಲ್ಮನವಿ ನ್ಯಾಯಾಲಯದ ಮುಂದೆ ಅವರ ಮನವಿಯನ್ನು 534 ದಿನಗಳವರೆಗೆ ತಡೆಹಿಡಿಯಲಾಯಿತು. ವಕೀಲರ ನಿರ್ಲಕ್ಷ್ಯದಿಂದ ವಿಳಂಬ ಉಂಟಾಗಿರುವುದರಿಂದ ದಾವೆದಾರರಿಗೆ ತೊಂದರೆಯಾಗಬಾರದು ಎಂದು ವಿಳಂಬವನ್ನು ಕ್ಷಮಿಸಲಾಗಿತ್ತು. ಆದರೆ ಪ್ರತಿವಾದಿ ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿದಾರರ ವಿಳಂಬ ಕ್ಷಮಿಸುವ ಆದೇಶವನ್ನು ರದ್ದುಗೊಳಿಸಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರ 534 ದಿನಗಳ ವಿಳಂಬ ಮನ್ನಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಈ ಮನವಿ ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ, ವಿಚಾರಣೆಯಲ್ಲಿ ವಿಳಂಬಕ್ಕೆ ತಮ್ಮ ವಕೀಲರನ್ನಷ್ಟೇ ದಾವೆದಾರರು ದೂರುವಂತಿಲ್ಲ ಎಂದು ತೀರ್ಪು ನೀಡಿದೆ. ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾಗುವಲ್ಲಿ ತಮ್ಮ ವಕೀಲರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಾವೆದಾರರು ದೂಷಿಸುವ ಪ್ರವೃತ್ತಿಯನ್ನು ದೀರ್ಘಕಾಲದಿಂದ ನೋಡುತ್ತಾ ಬಂದಿದ್ದೇವೆ. ವಕೀಲರದ್ದೇ ಅಸಡ್ಡೆ ಅಥವಾ ನಿರ್ಲಕ್ಷ್ಯ ಎಂದು ಭಾವಿಸಿದರೂ ಕೂಡ, ತನ್ನ ಸ್ವಂತ ಹಕ್ಕುಗಳ ಬಗ್ಗೆ ಜಾಗರೂಕನಾಗಿರಬೇಕಿರುವುದು ದಾವೆದಾರನ ಕರ್ತವ್ಯವಾಗಿರುತ್ತದೆ. ಹೀಗಾಗಿ ಪ್ರಕರಣ ದಾಖಲಿಸುವಲ್ಲೇ ಅತಿಯಾದ ವಿಳಂಬ ಉಂಟಾಗಿದ್ದಾಗ ಅದು ಕ್ಷಮಿಸಲು ಆಧಾರವಾಗದು ಎಂದು ನ್ಯಾಯಾಲಯ ವಿವರಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.