24/12/2024

Law Guide Kannada

Online Guide

HSRP ನಂಬರ್ ಪ್ಲೇಟ್ ಅಳವಡಿಕೆ : ಗಡುವು ವಿಸ್ತರಿಸಿದ ಹೈಕೋರ್ಟ್

ಬೆಂಗಳೂರು: ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (HSRP) ಕಡ್ಡಾಯ ಅಳವಡಿಕೆಗಿದ್ದ ಗಡುವನ್ನು ಹೈಕೋರ್ಟ್ ಡಿಸೆಂಬರ್ 5ರ ವರೆಗೂ ವಿಸ್ತರಣೆ ಮಾಡಿದೆ.  ಕರ್ನಾಟಕ ಹೈಕೋರ್ಟ್ ನ್ಯಾ. ಕೆ. ಕಾಮೇಶ್ವರ ರಾವ್ ಮತ್ತು ಕೆ. ರಾಜೇಶ್ ರೈ ಅವರಿದ್ದ ನ್ಯಾಯಪೀಠ, HSRP ನಂಬರ್ ಪ್ಲೇಟ್ ಅಳವಡಿಕೆಗೆ ಇದ್ದ ಗಡುವನ್ನು ಡಿಸೆಂಬರ್ 5ರವರೆಗೆ ವಿಸ್ತರಣೆ ಮಾಡಿದೆ.

ನಿರ್ದಿಷ್ಟ ಉತ್ಪಾದಕರು ಮಾತ್ರ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್ ಗಳು ಮಾತ್ರ ಅಳವಡಿಸಬೇಕು ಎಂಬ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಇದೇ ವೇಳೆ ಮುಂದೂಡಲಾಯಿತು.

ವಿಚಾರಣೆ ವೇಳೆ ಮೇಲ್ಮನವಿ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರು, ಹಲವು ಅರ್ಜಿಗಳನ್ನು ಸಲ್ಲಿಕೆ ಮಾಡಿರುವುದರಿಂದ ಪೀಠಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಮಗ್ರವಾದ ವರದಿ ನೀಡಲಾಗುವುದು. ಮುಂದಿನ ವಾರ ಯಾವುದೇ ದಿನ ವಿಚಾರಣೆ ನಡೆಸಬಹುದು ಎಂದು ಪೀಠಕ್ಕೆ ಮನವಿ ಮಾಡಿದರು.

ವಾಹನ ತಯಾರಿಸುವ ಮೂಲ ಸಾಧನಗಳ ಉತ್ಪಾದಕರು ಅನುಮತಿಸಿರುವ ಲೈಸನ್ಸ್ ಹೊಂದಿರುವ ಅತಿ ಸುರಕ್ಷಿತ ನಂಬರ್ ಪ್ಲೇಟ್ಗಳನ್ನು ಉತ್ಪಾದಕರು ಮಾತ್ರ ಎಚ್ಎಸ್ಆರ್ ಪ್ಲೇಟ್ಗಳನ್ನು ಹಳೆಯ ವಾಹನಗಳಿಗೆ ಪೂರೈಸಬೇಕು. ಈ ಫಲಕಗಳನ್ನು ವಾಹನ ಉತ್ಪಾದಕರು ಅನುಮತಿ ನೀಡುವ ಡೀಲರ್ ಗಳು ಮಾತ್ರ ಅಳವಡಿಸಬೇಕು ಎಂಬ ನಿಯಮ ರೂಪಿಸಲಾಗಿತ್ತು.

ಹಳೆಯ ವಾಹನಗಳಿಗೆ ಆಗಸ್ಟ್, 2024ರ ಒಳಗೆ ನೂತನ ನಂಬರ್ ಪ್ಲೇಟ್ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆ ಹೊರಡಿಸಿರುವ ಸುತ್ತೋಲೆ ಮತ್ತು ಈ ಸುತ್ತೋಲೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.ಈ ಮೇಲ್ಮನವಿಗಳ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದ ಮುಂದಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.