ಪೋಕ್ಸೊ ಸಂತ್ರಸ್ತ ಬಾಲಕಿಗೆ 150 ಪ್ರಶ್ನೆ: ವಕೀಲರಿಗೆ ಬುದ್ಧಿವಾದ ಹೇಳಿದ ಸುಪ್ರೀಂ ಕೋರ್ಟ್
ನವದೆಹಲಿ: ನಾಲ್ಕು ವರ್ಷ ವಯೋಮಾನದ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಬಾಲಕಿಗೆ ಪ್ರತಿವಾದಿ ಪರ ವಕೀಲರು ವಿಚಾರಣಾ ನ್ಯಾಯಾಲಯದಲ್ಲಿ ಪಾಟಿ ಸವಾಲಿನ ವೇಳೆ ಸುಮಾರು 150 ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದನ್ನು ಗಮನಿಸಿದ ಸುಪ್ರೀಂಕೋರ್ಟ್ ವಕೀಲರಿಗೆ ಬುದ್ಧಿವಾದ ಹೇಳಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಅಂತಹ ಸಂದರ್ಭಗಳಲ್ಲಿ ವಕೀಲರು ವಿವೇಚನೆ ಹಾಗೂ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ನಾಲ್ಕು ವರ್ಷದ ವಿದ್ಯಾರ್ಥಿನಿ ಮೇಲೆ 2021ರ ಆಗಸ್ಟ್ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕನಿಗೆ ವಿಧಿಸಿದ್ದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಶಿಕ್ಷಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ.
ವಿಚಾರಣೆ ವೇಳೆ ಶಿಕ್ಷಕನ ಮೇಲ್ಮನವಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ ನ್ಯಾಯಾಲಯ ಅಂತಹ ಪ್ರಕರಣಗಳಲ್ಲಿ ಪಾಟಿ ಸವಾಲು ನಡೆಸುವಾಗ ವಕೀಲರು ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದಿತು. ಅಲ್ಲದೆ ವಕೀಲ ವರ್ಗದ ಸದಸ್ಯರು ತಮ್ಮೊಳಗೆ ಸ್ವಲ್ಪವಾದರೂ ಮಾನವೀಯತೆ ಇರಿಸಿಕೊಂಡಿರಬೇಕು. ನಾಲ್ಕು ವರ್ಷದ ಪುಟ್ಟ ಹುಡುಗಿಗೆ ಪಾಟಿ ಸವಾಲಿನ ವೇಳೆ 150 ಪ್ರಶ್ನೆಗಳನ್ನು ಕೇಳಲಾಗಿದೆ. ಅವುಗಳಲ್ಲಿ ಶೇ 80ರಿಂದ 90ರಷ್ಟು ಅಪ್ರಸ್ತುತ ಪ್ರಶ್ನೆಗಳಾಗಿವೆ. ವಿಚಾರಣಾರ್ಹತೆಗೆ ಸಂಬಂಧಿಸಿದಂತೆ ನೀವು ಉತ್ತಮ ವಾದ ಹೊಂದಿರಬಹುದಾದರೂ ಸ್ವಲ್ಪವಾದರೂ ಮಾನವೀಯತೆ ತೋರಬೇಕು ಎಂದು ನ್ಯಾ. ಓಕಾ ಅವರು ಪ್ರತಿವಾದಿ ವಕೀಲರನ್ನುದ್ದೇಶಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಆರೋಪಿ ಪರ ವಕೀಲರಾದ ನಿತಿನ್ ಸಲೂಜಾ, ನಿಶ್ಚಲ್ ತ್ರಿಪಾಠಿ, ಅನಿರ್ಬನ್ ಚಂದ್ರ, ಶಶಾಂಕ್ ಉಪಾಧ್ಯಾಯ ವಾದ ಮಂಡಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ