ಸಾಕ್ಷಿ ಸಂಗ್ರಹಕ್ಕೆ ದಂತ ವೈದ್ಯರ ನೆರವು ಅಪರೂಪದಲ್ಲಿ ಅಪರೂಪದ ಪ್ರಕರಣ – ಅತ್ಯಾಚಾರ ಆರೋಪಿಗೆ ಆಜೀವ ಜೀವಾವಧಿ ಶಿಕ್ಷೆ
ಮಾನಸಿಕ ಖಿನ್ನತೆಗೊಳಗಾಗಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆಗೆ ಯತ್ನಿಸಿದ ಆರೋಪಿಗೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯ ಕೊನೆಯ ಉಸಿರಿರುವವರೆಗೂ ಆಜೀವ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅತ್ಯಂತ ವಿರಳ ಪ್ರಕರಣಗಳಲ್ಲಿ ನ್ಯಾಯಾಲಯಗಳು ಆಜೀವ ಜೀವಾವಧಿ ಶಿಕ್ಷೆ ವಿಧಿಸುತ್ತವೆ. ಮಾನಸಿಕ ಖಿನ್ನತೆಯುಳ್ಳ ಯುವತಿ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಪ್ರಕರಣದಲ್ಲಿ ಆರೋಪಿಗೆ ಕೊನೆಯ ಉಸಿರಿರುವವರೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹನುಮಂತ ಶಿಕ್ಷೆಗೊಳಗಾದ ಆರೋಪಿ. ಪ್ರಕರಣದಲ್ಲಿ ಸಾಕ್ಷಿ ಕೊರತೆಯಿದ್ದುದರಿಂದ ದಂತ ವೈದ್ಯರ ಸಹಾಯ ಪಡೆದು ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಶೇಷ.
ಘಟನೆಯ ವಿವರ
2019ರ ಮೇ 17ರಂದು ವಿಶೇಷ ಚೇತನ ಮಹಿಳೆ ಮೇಲೆ ಆರೋಪಿ ಅತ್ಯಾಚಾರ ನಡೆಸಿದ್ದ ಆಕೆ ಬಿಡಿಸಿಕೊಳ್ಳಲು ಯತ್ನಿಸಿದಾಗ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದ. ನಂತರ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದ.
ದಂತ ಮಾದರಿ ವರದಿ ನೆರವು ಯುವತಿ ಮಾನಸಿಕವಾಗಿ ಖಿನ್ನಳಾಗಿದ್ದರಿಂದ ಆರೋಪಿ ಹೆಸರು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗರಲಿಲ್ಲ.
ಆಗಿನ ಪಿಎಸ್‌ಐ ಪ್ರಕಾಶ್ ಬಣಕಾರ ಬೆರಳು ಮುದ್ರೆ ಆಧಾರದ ಮೇಲೆ ಆರೋಪಿ ಹನಮಂತನನ್ನು ಬಂಧಿಸಿ ಕಳ್ಳತನ ಮಾಡಿದ್ದ ಮೊಬೈಲ್ ವಶಪಡಿಸಿಕೊಂಡರು. ಆಗಿನ ಸಿಪಿಐ ಕೆ.ಎಸ್.ಹಟ್ಟಿ ತನಿಖೆ ಕೈಗೊಂಡಿದ್ದರು. ಸಾಕ್ಷಿ ಕೊರತೆ ಕಾರಣ ಯುವತಿಗೆ ಆರೋಪಿ ಕಚ್ಚಿದ ಗುರುತುಗಳನ್ನು ವೈಜ್ಞಾನಿಕವಾಗಿ ಸಾಕ್ಷಿಯಾಗಿ ಪರಿಗಣಿಸಲಾಯಿತು. ಹುಬ್ಬಳ್ಳಿಯ ಶ್ರೀ ಮಂಜುನಾಥ ಡೆಂಟಲ್ ಕಾಲೇಜಿನ ತಜ್ಞ ಡಾ.ಆಶಿತ್ ಆಚಾರ್ಯ ಗಾಯದ ಹಲ್ಲಿನ ಗುರುತುಗಳನ್ನು ಆರೋಪಿಯದ್ದೇ ಎಂದು ವರದಿ ನೀಡಿದರು. ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯ ದಂತ ವೈದ್ಯ ಡಾ.ಪ್ರಮೋದ ಇಂಗಳೇಶ್ವರ ಹೋಲಿಕೆ ಮಾಡುವಲ್ಲಿ ಸಾಥ್ ನೀಡಿದರು. ಡಾ.ಆತೀಶ್ ಹೊಸ ದಿಲ್ಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದಲ್ಲಿಯೂ ಆರೋಪಿಗಳ ದಂತ ಮಾದರಿ ವರದಿ ನೀಡಿದ್ದರು.
ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಿಪಿಐ ಆರ್.ಎಚ್. ಹಾನಾಪೂರ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಆರೋಪಿಗೆ ಆಜೀವ ಜೀವಾವಧಿ ಶಿಕ್ಷೆ ಹಾಗೂ 42 ಸಾವಿರ ರೂ. ದಂಡ ವಿಧಿಸಲಾಗಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಎ.ಜಿ.ಹೆಬಸೂರ ವಾದ ಮಂಡಿಸಿದ್ದರು.
ಲಾಗೈಡ್ ವರದಿ