ಮಾನವೀಯ ಅಂತಃಕರಣದ ನಿವೃತ್ತ ನ್ಯಾಯಮೂರ್ತಿ ಶ್ರೀ ಎನ್ ಕೆ ಸುಧೀಂದ್ರ ರಾವ್ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಮುಖ್ಯಸ್ಥರಾಗಿ ನೇಮಕ
ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿಗಳು, ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಶ್ರೀ ಎನ್ ಕೆ ಸುಧೀಂದ್ರ ರಾವ್ ಅವರನ್ನು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಮಾನವೀಯ ಕಳಕಳಿಯುಳ್ಳ ಶ್ರೀ ಎನ್ ಕೆ ಸುಧೀಂದ್ರ ರಾವ್ ಅವರು ತಮ್ಮ ವೃತ್ತಿ ಜೀವನದಲ್ಲಿ ಬಡವರು ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದರು. ಅವರ ಹಲವು ತೀರ್ಪುಗಳು ನೊಂದವರಿಗೆ ನ್ಯಾಯ ದೊರಕಿಸಿತ್ತು. ಸದಾ ಸಮಾಜಮುಖಿ ಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ಗೌರವಿಸುವ ಶ್ರೀ ಎನ್ ಕೆ ಸುಧೀಂದ್ರ ರಾವ್ ಅವರು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಮುಖ್ಯಸ್ಥರಾಗಿರುವುದು ಪೊಲೀಸರಿಗೆ ಖುಷಿ ನೀಡಿದೆ. ಈ ಶುಭ ಸಂದರ್ಭದಲ್ಲಿ ಲಾಗೈಡ್ ಬಳಗ ದ ಶುಭಕಾಮನೆಗಳು.
ನ್ಯಾಯಮೂರ್ತಿ ಶ್ರೀ ಎನ್ ಕೆ ಸುಧೀಂದ್ರ ರಾವ್
ಭ್ರಷ್ಟಾಚಾರ ವಿರೋಧಿ ನ್ಯಾಯಮೂರ್ತಿ ಎಂದೇ ನ್ಯಾಯಮೂರ್ತಿ ಶ್ರೀ ಎನ್ ಕೆ ಸುಧೀಂದ್ರ ರಾವ್ ಪ್ರಸಿದ್ಧರಾಗಿದ್ದಾರೆ. ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಅಂದಿನ ಲೋಕಾಯುಕ್ತ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾಗಿದ್ದಾಗ ನಿವೃತ್ತ ನ್ಯಾ. ಸುಧೀಂದ್ರ ರಾವ್ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದರು.
ಪೋಲೀಸ್ ದೂರು ಪ್ರಾಧಿಕಾರ
ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಸಿ ಆರ್ ಕುಮಾರಸ್ವಾಮಿ ಅವರ ಮೂರು ವರ್ಷಗಳ ಅವಧಿಯು 2022ರ ಜುಲೈ 18ರಂದು ಪೂರ್ಣಗೊಂಡಿದ್ದರಿಂದ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಈ ಸ್ಥಾನಕ್ಕೆ ನ್ಯಾ. ಸುಧೀಂದ್ರ ರಾವ್ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಪೊಲೀಸ್ ಕಾಯಿದೆ 1963ರ ಸೆಕ್ಷನ್ 20ಸಿ ಮತ್ತು 20ಡಿ ಅಡಿ ರಾಜ್ಯ ಸರ್ಕಾರವು ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವನ್ನು ರಚಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಅಧಿಕಾರಿಗಳ ವಿರುದ್ಧ ದೂರು ಪರಿಶೀಲಿಸಿ, ಅಗತ್ಯ ಕ್ರಮ ಜರುಗಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪೊಲೀಸ್ ದೂರು ಪ್ರಾಧಿಕಾರ ರಚಿಸಲಾಗಿದೆ. ಆದರೆ, ಸಕಾಲಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡುತ್ತಿಲ್ಲ. ಪ್ರಾಧಿಕಾರಕ್ಕೆ ಅಗತ್ಯ ಸಿಬ್ಬಂದಿ ಮತ್ತು ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪಗಳು ಇದೇ. ಇದೀಗ ದಕ್ಷ ನ್ಯಾಯಮೂರ್ತಿಗಳ ಆಯ್ಕೆಯಿಂದ ಇವೆಲ್ಲಾ ಸಮಸ್ಯೆಗಳಿ ಪರಿಹಾರ ಸಿಗುವ ಆಶಾಭಾವನೆ ಎಲ್ಲರದ್ದು.
ವರದಿ : ಲಾಗೈಡ್