ನ್ಯಾಯಾಲಯ – ದೇವಾಲಯ
ನ್ಯಾಯಾಲಯ ನ್ಯಾಯದೇವತೆಯ ಆಲಯ. ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ. ನ್ಯಾಯಾಲಯದ ಕೆಲ ತೀರ್ಪುಗಳು ಐತಿಹಾಸಿಕ ಮೈಲುಗಲ್ಲಾಗಿದೆ. ಅದಕ್ಕೆ ಮತ್ತೊಂದು ಸೇರ್ಪಡೆ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೃಷ್ಣ ದೀಕ್ಷಿತ್ ಅವರು ನೀಡಿರುವ ತೀರ್ಪು. ಅವರ ಈ ತೀರ್ಪು ನ್ಯಾಯಾಲಯದ ಘನತೆ ಗೌರವವನ್ನು ಇಮ್ಮಡಿಗೊಳಿಸಿದೆ. ಅದರಲ್ಲೂ ಅವರು ತೀರ್ಪು ನೀಡುವಾಗ ಮಾಡಿರುವ ಉಲ್ಲೇಖ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಐತಿಹಾಸಿಕ ಮಾನವೀಯ ತೀರ್ಪು
ಅದು 84 ವರ್ಷ ವಯಸ್ಸಿನ ವಯೋವೃದ್ದರೊಬ್ಬರ ಪ್ರಕರಣ. ಆ ವಯೋವೃದ್ದೆಗೆ ಇಬ್ಬರು ಗಂಡು ಮಕ್ಕಳು. ಹೊಟ್ಟೆ ಬಟ್ಟೆ ಕಟ್ಟಿ ಆ ಮಹಾತಾಯಿ ಮಕ್ಕಳನ್ನು ಸಾಕಿದ್ದರು. ತಾನು ಹಸಿದಿದ್ದು ಮಕ್ಕಳಿಗೆ ಹೊಟ್ಟೆ ತುಂಬು ಉಣಬಡಿಸಿದ್ದಳು. ಆದರೆ ಏನು ಪ್ರಯೋಜನ ಬೆಳೆದ ಮೇಲೆ ಮಕ್ಕಳು ತಮ್ಮ ದಾರಿ ತಾವು ನೋಡಿಕೊಂಡಿದ್ದರು. ದಿಕ್ಕು ತೋಚದೆ ಅಜ್ಜಿ ಕಂಗಾಲಾಗಿದ್ದರು. ಈ ವಿಚಾರವನ್ನು ತಿಳಿದ ಕೆಲವರು ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ. ಇಬ್ಬರು ಮಕ್ಕಳು ವಯೋವೃದ್ದ ತಾಯಿಗೆ ಪ್ರತಿ ತಿಂಗಳು ತಲಾ 5 ಸಾವಿರ ಜೀವನಾಂಶ ನೀಡುವಂತೆ ಸೂಚಿಸಿದ್ದರು. ಆದರೆ ಆ ಪಾಪಿ ಮಕ್ಕಳು ಜಿಲ್ಲಾ ದಂಡಧಿಕಾರಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು.
ಕೃಷ್ಣ ದೀಕ್ಷಿತರ ತೀರ್ಪು – ಆದೇಶ ಕೇಳಿ ಕಕ್ಕಾಬಿಕ್ಕಿಯಾದ ಪಾಪಿ ಮಕ್ಕಳು
ಪ್ರಕರಣ ದಕ್ಷ ಹಾಗೂ ಮಾನವೀಯ ಕಳಕಳಿಯುಳ್ಳ ಹಾಗೂ ಸದಾ ಬಡವರ ನೊಂದವರ ಪರ ಮಿಡಿಯುವ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೃಷ್ಣ ದೀಕ್ಷಿತ್ ಅವರ ಬೆಂಚಿಗೆ ಬಂದಿತ್ತು. ಪ್ರಕರಣವನ್ನು ನೋಡಿದ ಎಲ್ಲರಿಗೂ ಮೇಲ್ನೋಟಕ್ಕೆ ತೀರ್ಪು ಏನು ಬರಬಹುದು ಎಂಬುದು ಸಹಜವಾಗಿ ಗೊತ್ತಿತ್ತು. ಆದರೆ ಆ ತೀರ್ಪು ಹೇಗೆ ಬರುತ್ತದೆ. ಈ ಬಗ್ಗೆ ಗೌರವಾನ್ವಿತ ನ್ಯಾಯಮೂರ್ತಿಗಳು ಏನು ಹೇಳುತ್ತಾರೆ ಅನ್ನೋದು ಎಲ್ಲರ ಕುತೂಹಲವಾಗಿತ್ತು. ಯಾಕಂದ್ರೆ ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿತ್ತು. ಒಂದು ಕಡೆ ಕಾನೂನು ಮತ್ತೊಂದು ಕಡೆ ಸಾಮಾಜಿಕ ಹಾಗೂ ಮಾನವೀಯತೆಯ ನೆಲೆಯಲ್ಲಿ ಈ ಪ್ರಕರಣವನ್ನು ನೋಡಬೇಕಿತ್ತು. ಈ ಪ್ರಕರಣವನ್ನು ನ್ಯಾಯಮೂರ್ತಿಗಳು ನಿಭಾಯಿಸಿದ ರೀತಿ ಮುಂದಿನ ಪೀಳಿಗೆಗೆ ಮಾದರಿಯಾಯಿತಲ್ಲದೆ. ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ನ್ಯಾಯಾಲಯದ ಹಾಗೂ ನ್ಯಾಯಮೂರ್ತಿಗಳ ಗೌರವವನ್ನು ಮತ್ತಷ್ಟು ಹೆಚ್ಚಿಸಿತು. ಗೌರವಾನ್ವಿತ ನ್ಯಾಯಾಮೂರ್ತಿಗಳು ಆ ವಯೋವೃದ್ದ ತಾಯಿಗೆ ಮಕ್ಕಳು ತಲಾ 5 ಸಾವಿರ ನೀಡುವ ತೀರ್ಪುನ್ನು ಎತ್ತಿ ಹಿಡಿದರು. ಜೊತೆಗೆ ಒಂದು ತಿಂಗಳ ಒಳಗೆ ಇದು ಜಾರಿಯಾಗಬೇಕು ಇಲ್ಲವಾದರೆ ಪ್ರತಿ ದಿನ 100 ರೂಪಾಯಿ ಜುಲ್ಮಾನೆ ನೀಡುವಂತೆ ಸೂಚನೆ ನೀಡಿದರು. ಇದು ತೀರ್ಪಿನ ಭಾಗ ಆದರೆ ತೀರ್ಪು ನೀಡುವಾಗ ನ್ಯಾಯಾಮೂರ್ತಿಗಳು ಭಾರತೀಯ ಸಂಸ್ಕೃತಿಯ ಭಾಗವನ್ನಯ ಉಲ್ಲೇಖಿಸಿದರು. ಮಾತೃದೇವೋಭವ, ಪಿತೃದೇವೋಭವ, ಗುರುದೇವೋಭವ್ ಮಹತ್ವವನ್ನು ವಿವರಿಸಿದರು. With No Joy in Heart, This Court Observes That Nowadays, a Section of Youngsters is Failing to Look After The Aged And Ailing Parents and The Number is Swelling. This is Not a Happy Development ಎಂದು ವಿಷಾದ ವ್ಯಕ್ತಪಡಿಸಿದರು.
ಅಪಾರ ಮೆಚ್ಚುಗೆ
ನ್ಯಾಯಾಮೂರ್ತಿಗಳು ಆದೇಶ ಎತ್ತಿ ಹಿಡಿದ ಜೊತೆಗೆ ಅವರು ಹೇಳಿದ ಮಾತುಗಳು ಎಲ್ಲರ ಎದೆಗೆ ನಾಟಿದವು. ಅದು ಎಷ್ಟರ ಮಟ್ಟಿಗೆ ಎಂದರೆ ಸ್ವಾಮೀಜಿಯೊಬ್ಬರು ತಮ್ಮ ಪ್ರವಚನದ ವೇಳೆ ಗೌರವಾನ್ವಿತ ನ್ಯಾಯಮೂರ್ತಿಗಳ ಈ ತೀರ್ಪನ್ನು ತಮ್ಮ ಭಕ್ತ ವೃಂದಕ್ಕೆ ಯಥಾವತ್ತಾಗಿ ವಿವರಿಸಿದರು. ಅಷ್ಟೇ ಅಲ್ಲ ತಮ್ಮ ಪತ್ರಿಕಾ ಲೇಖನದಲ್ಲೂ ಇದನ್ನು ಪ್ರಕಟಿಸದರು. ಅಷ್ಟರಮಟ್ಟಿಗೆ ಈ ತೀರ್ಪು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಮುಂದಿನ ಪೀಳಿಗೆಗೆ ಒಂದು ರೀತಿ ಮೈಲುಗಲ್ಲಾಯಿತು ಎಂದರು ತಪ್ಪಾಗಲಾರದು.
ವರದಿ : ಲಾಗೈಡ್