ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಜಯಕುಮಾರ್ ಅಮಾನತು
ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಇತರ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಿದ ಸೆಷನ್ಸ್ ನ್ಯಾಯಾಧೀಶರನ್ನು ತೆಲಂಗಾಣ ಹೈಕೋರ್ಟ್ ಅಮಾನತುಗೊಳಿಸಿದೆ .
ಈ ವಿಚಾರದಲ್ಲಿ ನ್ಯಾಯಾಧೀಶರು ಅನಾವಶ್ಯಕ ಆತುರದಿಂದ ವರ್ತಿಸಿದ್ದಾರೆ ಎಂದು ಹೈಕೋರ್ಟ್ ಹೇಳಿದೆ. ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಜಯಕುಮಾರ್ ಅಮಾನತುಗೊಂಡವರು.
ರಾಘವೇಂದ್ರ ರಾಜು ಅವರು ಸಿಆರ್‌ಪಿಸಿಯ ಸೆಕ್ಷನ್ 200 ರ ಅಡಿಯಲ್ಲಿ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ ಮತ್ತು ದೂರುದಾರರ ಹೇಳಿಕೆಯನ್ನು ದಾಖಲಿಸದೆ ಅನಾವಶ್ಯಕ ತರಾತುರಿಯಲ್ಲಿ ವರ್ತಿಸಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.
2018ರ ಚುನಾವಣೆ ವೇಳೆ ಸಲ್ಲಿಸಿದ್ದ ಅಪಿಡವಿಟ್ ತಿರುಚಲಾಗಿದೆ ಎಂದು ಸಚಿವ ಶ್ರೀನಿವಾಸ ಗೌಡ, ಸಿಇಸಿ ರಾಜೀವ್‌ಕುಮಾರ್ ಹಾಗೂ ಇತರರ ವಿರುದ್ಧ ಆಗಸ್ಟ್‌ನಲ್ಲಿ ಎಫ್ ಐ ಆರ್ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಸಚಿವ ಶ್ರೀನಿವಾಸ್ ಅವರನ್ನು ಮೊದಲ ಆರೋಪಿ ಎಂದು ಹೆಸರಿಸಲಾಗಿದ್ದು, ಸಿಇಸಿ ಕುಮಾರ್ ಮತ್ತು ಇತರ ಹಲವಾರು ಅಧಿಕಾರಿಗಳನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿದೆ.
ಎಂಪಿ/ಎಂಎಲ್ಎಗಳ ವಿಚಾರಣಾ ನ್ಯಾಯಾಲಯದಲ್ಲಿ ವಿಶೇಷ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಕೆ.ಜಯಕುಮಾರ್ ವಿರುದ್ಧ ಆಡಳಿತಾತ್ಮಕ ಕ್ರಮವಾಗಿ ಅಮಾನತು ಆದೇಶ ನೀಡಲಾಗಿದೆ. ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೈಕೋರ್ಟ್‍ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ತೆಲಂಗಾಣ ನಾಗರಿಕ ಸೇವೆಗಳ ನಿಯಮಗಳು, 1991ರಡಿ ನ್ಯಾಯಾಂಗ ಅಧಿಕಾರಿಯನ್ನು ಉಚ್ಚ ನ್ಯಾಯಾಲಯವು ಅಮಾನತುಗೊಳಿಸಿದೆ.