ಕ್ರಿಮಿನಲ್ ಪ್ರಕರಣಗಳಲ್ಲಿ ಅಲಿಬಿಯ ಪರಿಕಲ್ಪನೆ
ಅಲಿಬಿ ಎಂಬ ಪದ ಲ್ಯಾಟಿನ್ ಮೂಲದ್ದಾಗಿದ್ದು, ಅಲಿಬಿ ಎಂದರೆ ಬೇರೆ ಕಡೆ ಅಥವಾ ಬೇರೆ ಪ್ರದೇಶ ಎಂಬ ಅರ್ಥದಿಂದ ಕೂಡಿರುತ್ತದೆ. ಅಲಿಬಿಯ ಪರಿಕಲ್ಪನೆಯನ್ನು ಕ್ರಿಮಿನಲ್ ಸ್ವರೂಪದ ಪ್ರಕರಣಗಳಲ್ಲಿ ಕೂಡ ಬಳಕೆಯಲ್ಲಿರುತ್ತದೆ. ಆರೋಪಿ ಕೃತ್ಯ ನಡೆದ ಸ್ಥಳದಲ್ಲಿ ಕೃತ್ಯ ನಡೆದ ದಿನ ಹಾಗೂ ಸಮಯದಲ್ಲಿ ಹಾಜರಿರಲಿಲ್ಲ, ಆ ಸಮಯದಲ್ಲಿ ಬೇರೆ ಕಡೆ ಇದ್ದೆ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸುವುದಾಗಿದೆ. ಅಲಿಬಿ ಪರಿಕಲ್ಪನೆ ಭಾರತ ಸಾಕ್ಷ್ಯ ಅಧಿನಿಯಮ ಕಲಂ 11 (1) ರಲ್ಲಿ ಪರೋಕ್ಷವಾಗಿ ಕಂಡುಬರುತ್ತದೆ. ಭಾ.ಸಾ.ಅ ಕಲಂ 11 ಸುಸಂಬಧ್ದವಲ್ಲದ ಸಂಗತಿಗಳು ಸುಸಂಬಧ್ದವಾಗುವ ಬಗ್ಗೆ ವ್ಯಾಖ್ಯಾನಿಸುತ್ತದೆ.
ಅಲಿಬಿ ಗೆ ಉದಾ: ಮೈಸೂರಿನಲ್ಲಿ ನಡೆದ ಒಬ್ಬ ವ್ಯಕ್ತಿಯ ಕೊಲೆಯ ದಿನಾಂಕ ಮತ್ತು ಸಮಯದಂದು ಆರೋಪಿ ದೆಹಲಿಯ ಒಂದು ಹೋಟೆಲ್ ನಲ್ಲಿ ವಾಸ್ತವವಿದ್ದೆನೆಂದು ದೆಹಲಿ ಹೋಟೆಲ್ ನ ಹಣ ಪಾವತಿಸಿದ ರಸೀದಿಯನ್ನು ಹಾಜರುಪಡಿಸಿ ಆರೋಪದಿಂದ ವಿನಾಯಿತಿ ಕೋರುವುದಾಗಿದೆ.
ಅಲಿಬಿಯನ್ನು ಸಾಮಾನ್ಯವಾಗಿ ಕ್ರಿಮಿನಲ್ ಸ್ವರೂಪದ ಆರೋಪ ಎದುರಿಸುತ್ತಿರುವ ಆರೋಪಿ ನ್ಯಾಯಾಲಯದಲ್ಲಿ ಚಾರ್ಜ್ ಫ್ರೇಮ್ ಮಾಡುವ ಪ್ರಾರಂಬಿಕ ಹಂತ ಅಥವಾ ರಕ್ಷಣಾ ಸಾಕ್ಷ್ಯ ಹಾಜರುಪಡಿಸುವ ಹಂತದ ಮೊದಲು ಕೋರುವುದು ಉಪಯುಕ್ತವಾಗಿದೆ. ಅಲಿಬಿಯನ್ನು ಸಾಭೀತುಪಡಿಸುವ ಹೊಣೆ ಭಾ.ಸಾ.ಅ ಕಲಂ 103 ರ ಪ್ರಕಾರ ಆರೋಪಿಯ ಜವಾಬ್ದಾರಿಯಾಗಿರುತ್ತದೆ.
ವೈವಾಹಿಕ ಪ್ರಕರಣಗಳಲ್ಲಿ, ಮಾನನಷ್ಟ ಪ್ರಕರಣಗಳಲ್ಲಿ ನಿರ್ಲಕ್ಷತೆಯಲ್ಲಿ ಪಾತ್ರವಹಿಸಿದ ಪ್ರಕರಣಗಳಲ್ಲಿ, ಸಾಮಾನ ಉದ್ದೇಶ ಹೊಂದಿದ ಪ್ರಕರಣಗಳಲ್ಲಿ ಅಲಿಬಿ ಸಮರ್ಥನೀಯವಾಗುವುದಿಲ್ಲ.
ಅಲಿಬಿ ಸಂಬಂಧಿತ ಘನ ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳು.
1. ಬಿನಯ್ ಕುಮಾರ್ ಮತ್ತು ಇತರರ ವಿರುದ್ದ ಸ್ಟೇಟ್ ಆಫ್ ಬಿಹಾರ್ (1996): ಆರೋಪಿ ಅಲಿಬಿಯ ಮೊರೆ ಹೋಗಿರುತ್ತಾನೆಂದು ಆಧರಿಸಿ ಪ್ರಾಸಿಕ್ಯೂಷನ್ ರವರು ಸಮಂಜಸವಾದ ಅನುಮಾನದ ವ್ಯಾಪ್ತಿ ಮೀರಿ ಸಾಭೀತುಪಡಿಸುವ ಅಗತ್ಯತೆ ಇರುತ್ತದೆ.
2. ಜಯಂತಿ ಬಾಯಿ ಬೆಂಕೇರ್ ಬಾಯಿ ವಿ/ಎಸ್ ಸ್ಟೇಟ್ ಆಫ್ ಗುಜರಾತ್: ಅಲಿಬಿ ಸಾಭೀತುಪಡಿಸುವ ಹೊಣೆ ಆರೋಪಿಯದ್ದಾಗಿರುತ್ತದೆ. ಅಭಿಯೋಜನಾ ಹಾಗೂ ರಕ್ಷಣಾತ್ಮಕ ಸಾಕ್ಷ್ಯಗಳಲ್ಲಿ ಆರೋಪಿ ಪರ ವಾಲಿದರೆ ಆರೋಪಿಗೆ ಉತ್ತಮ ಅವಕಾಶ ಮತ್ತು ಫಲಿತಾಂಶ ನೀಡುತ್ತದೆ.
ಅಂತಿಮವಾಗಿ ಅಲಿಬಿ ಭಾ.ದಂ.ಸಂಹಿತೆಯಲ್ಲಿ ಪ್ರಸ್ತಾಪಿಸಿರುವ ಸಾಮಾನ್ಯ ಅಪವಾದಗಳ ಭಾಗವಾಗಿರದೇ, ಸಾಕ್ಷ್ಯದ ನಿಯಮವಾಗಿದ್ದು, ಅಲಿಬಿ ಪ್ರತಿಪಾದಿಸುವ ವ್ಯಕ್ತಿಯ ಮೇಲೆ ಸಾಭೀತು ಪಡಿಸುವ ಹೊಣೆ ಇರುತ್ತದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ