ಆರೋಪಿ ಬಿಟ್ಟು ಬೇರೆಯವನನ್ನು ಬಂಧಿಸಿದಕ್ಕೆ 25 ಲಕ್ಷ ಪರಿಹಾರ – ಪೊಲೀಸರಿಂದ ದಂಡ ವಸೂಲಿಗೆ ಹೈಕೋರ್ಟ್ ಸೂಚನೆ
ವಿಶೇಷ ಪ್ರಕರಣವೊಂದರಲ್ಲಿ ವಾರೆಂಟ್ ಜಾರಿಯಾಗಿದ್ದ ಆರೋಪಿಯ ಬದಲು ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿದ ಕಾರಣಕ್ಕಾಗಿ 25 ಲಕ್ಷ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಬೆಂಗಳೂರಿನ ನಿವಾಸಿ ಎನ್.ನಿಂಗರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ವಾರೆಂಟ್ ಜಾರಿ ಗೊಳಿಸಿ ಆರೋಪಿಯನ್ನು ಬಂಧಿಸುವ ಮುನ್ನ ಅನುಸರಿಸಬೇಕಾದ ವಿಧಾನಗಳ ಕುರಿತು ಡಿಜಿಪಿ ಅವರು ಮಾರ್ಗಸೂಚಿ ಹೊರಡಿಸಬೇಕು ಎಂದು ನಿರ್ದೇಶಿಸಿದೆ.
ಎನ್‌ಜಿಎನ್ ರಾಜು ಎಂಬುವವರ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ಆದರೆ, ತನಿಖಾಧಿಕಾರಿಗಳು ಬೆಂಗಳೂರಿನ ನಿವಾಸಿ ಎನ್.ನಿಂಗರಾಜು ಎಂಬುವರನ್ನು ಬಂಧಿಸಿದ್ದರು. ಎನ್‌ಜಿಎನ್ ರಾಜು ಅವರ ತಂದೆಯ ಹೆಸರು ನಿಂಗೇಗೌಡ ಆಗಿತ್ತು. ಅದೇ ಮಾದರಿ ಹೆಸರು ಹೊಂದಿರುವ ಕಾರಣಕ್ಕೆ ಗೊಂದಲಕ್ಕೆ ಒಳಗಾಗಿ ಅರ್ಜಿದಾರ ನಿಂಗರಾಜು ಅವರನ್ನು ಬಂಧಿಸಲಾಗಿತ್ತು.
ಈ ಪ್ರಕರಣಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್
ತಂದೆ ಹೆಸರು ಒಂದೇ ಇತ್ತು ಎನ್ನುವ ಕಾರಣಕ್ಕೆ ಬಂಧಿಸಬೇಕಾದ ವ್ಯಕ್ತಿಯನ್ನು ಬಿಟ್ಟು ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿದ ಕ್ರಮ ಸರಿಯಲ್ಲ. ಯಾವುದೇ ವ್ಯಕ್ತಿಯನ್ನು ಬಂಧಿಸಬೇಕಾದರೆ ಪ್ರಾಥಮಿಕವಾಗಿ ಆತನ ವಿವರಗಳನ್ನು ಪರಿಶೀಲಿಸಬೇಕಲ್ಲವೇ ? ಎಂದು ಕೋರ್ಟ್ ಪ್ರಶ್ನಿಸಿತು ಪೊಲೀಸರ ಕ್ರಮದಿಂದ ಬಂಧಿತನ ವ್ಯಕ್ತಿಗೆ ಸಂವಿಧಾನದತ್ತವಾಗಿ ದೊರೆತಿರುವ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹರಣವಾಗಿದೆ. ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಅರ್ಜಿದಾರರಿಗೆ 8 ವಾರದೊಳಗೆ 25 ಲಕ್ಷ ಪರಿಹಾರವನ್ನು ನೀಡಬೇಕು. ಆ ಮೊತ್ತವನ್ನು ತಪ್ಪೆಸಗಿರುವ ಪೊಲೀಸ್ ಅಧಿಕಾರಿಯಿಂದ ವಸೂಲಿ ಮಾಡಬಹುದು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ವರದಿ : ಲಾಗೈಡ್