ಆರೋಪಿ ಖುಲಾಸೆ: ಹೈಕೋರ್ಟ್ ಅಸಮಾಧಾನ
ಬೆಂಗಳೂರು : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಖುಲಾಸೆಗೊಳಿಸಿದ ಫೋಕ್ಸೋ ನ್ಯಾಯಾಲಯದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಪ್ರಕರಣದ ಆರೋಪಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಷ್ಟೇ ಅಲ್ಲ, ಫೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಿಗೆ ವೃತ್ತಿಪರತೆಯ ಕೊರತೆ ಇದೆ. ಅವರು ನ್ಯಾಯಾಂಗ ಅಕಾಡೆಮಿ ವತಿಯಿಂದ ತರಬೇತಿ ಪಡೆಯಬೇಕು ಎಂದು ತಿಳಿಸಿದೆ. ಸಂತ್ರಸ್ತೆಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯನ್ನು ಫೋಕ್ಸೋ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸರಕಾರ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ಕುಮಾರ್ ಅವರ ನ್ಯಾಯಪೀಠವು ಈ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ಸಂತ್ರಸ್ತೆ ಪೋಷಕರು ಮತ್ತು ಸಂಬಂಧಿಕರು ಸಾಕ್ಷ್ಯಗಳನ್ನು ನುಡಿದಿದ್ದಾರೆ. ಆದರೂ ವಿಚಾರಣಾ ನ್ಯಾಯಾಲಯ ಸ್ವತಂತ್ರ ಸಾಕ್ಷ್ಯಗಳು ಅಗತ್ಯ ಎಂದು ಬಯಸಿರುವುದು ಸಾಧ್ಯವಾಗದ ಅಂಶವಾಗಿದೆ. ಫೋಕ್ಸೋ ವಿಶೇಷ ನ್ಯಾಯಾಲಯ ಸಾಕ್ಷ್ಯಾಧಾರಗಳನ್ನು ಸೂಕ್ಷ್ಮತೆಯಿಂದ ಪರಿಗಣಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಸಂತ್ರಸ್ತೆಯ ದೇಹದ ಮೇಲೆ ಯಾವುದೇ ಗಾಯಗಳಿಲ್ಲ ಎಂಬ ವೈದ್ಯರು ನೀಡಿದ ವರದಿಯ ಆಧಾರದಲ್ಲಿ ಡಿಸೆಂಬರ್ 2020ರಲ್ಲಿ ಫೋಕ್ಸೋ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದನ್ನು ರಾಜ್ಯ ಸರಕಾರ ಹೈಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿ ಪ್ರಶ್ನಿಸಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ