ನಕ್ಕರೆಂದು ಕೋರ್ಟ್ ನಲ್ಲೇ ವಕೀಲರ ಬಂಧನಕ್ಕೆ ಜಡ್ಜ್ ಆದೇಶ – ವಕೀಲರ ಪ್ರತಿಭಟನೆ
ಕೋಲ್ಕತ್ತ: ಕೋಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಲು ಕೋಲ್ಕತ್ತಾ ವಕೀಲರ ಸಂಘ ನಿರ್ಧರಿಸಿದೆ.
ವಕೀಲರ ಸಂಘ ಈ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದೆ.
ನ್ಯಾ.ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಯಾವುದೇ ಪ್ರಕರಣದ ವಿಚಾರಣೆಯನ್ನು ವಹಿಸಬಾರದೆಂದು ಮನವಿ ಸಲ್ಲಿಸಿದೆ.
ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ಸೋಮವಾರ ಪ್ರಕರಣ ವೊಂದರ ವಿಚಾರಣೆ ನಡೆಸುತ್ತಿದ್ದಾಗ ಮದರಸಾ ಸೇವಾ ಆಯೋಗದ ವಕೀಲರೊಬ್ಬರು ನಕ್ಕರೆಂದು ಅವರನ್ನು ತರಾಟೆಗೆ ತೆಗೆದುಕೊಂಡು ಎರಡು ವಾರಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದರು.
ನ್ಯಾಯಾಲಯದಲ್ಲಿ ವಿಧವೆಯೊಬ್ಬರ ಪರಿಹಾರ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾಗ ವಕೀಲರೊಬ್ಬರು ನಕ್ಕಿದ್ದು ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ಕೆರಳಿಸಿತು. ತಕ್ಷಣವೇ ವಕೀಲ ಪ್ರೊಸೇನ್ ಜಿತ್ ಮುಖರ್ಜಿ ಅವರನ್ನು ತಮ್ಮ ನ್ಯಾಯಾಲಯದ ಸಭಾಂಗಣದಿಂದಲೇ ಬಂಧಿಸುವಂತೆ ಆದೇಶ ಹೊರಡಿಸಿದರು. ಎರಡು ವಾರಗಳ ಜೈಲು ಶಿಕ್ಷೆಯನ್ನು ವಿಧಿಸಿದರು.
ವಿಧವೆ ತನ್ನ ಪರಿಹಾರಕ್ಕಾಗಿ ಅಲೆಯುತ್ತಿದ್ದಾರೆ. ಆದರೆ, ವಕೀಲರು ಇಲ್ಲಿ ನಗುತಿದ್ದಾರೆ ಎಂದು ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಸಿಟ್ಟಾದರು. ವಕೀಲ ಪ್ರೊಸೇನ್ ಜಿತ್ ಮುಖರ್ಜಿ ನ್ಯಾಯಾಲಯದ ನಿಂದನೆ ಮಾಡಿದ್ದಾರೆ ಎಂದರು.
ಪ್ರೊಸೇನ್ ಜಿತ್ ಮುಖರ್ಜಿ ಬೇಷರತ್ ಕ್ಷಮೆ ಯಾಚಿಸಿದರೂ ನ್ಯಾಯಮೂರ್ತಿಗಳು ಮನ್ನಿಸಲಿಲ್ಲ.
ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ವಕೀಲ ಪ್ರೊಸೇನ್ ಜಿತ್ ಅವರನ್ನು ಹೀನಾಯವಾಗಿ ನಿಂದಿಸಿ ಅವಮಾನಿಸಿದ್ದಾರೆ. ಕ್ರಿಮಿನಲ್ ನಂತೆ ಅವರನ್ನು ಕಾಣಲಾಗಿದೆ. ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ವಕೀಲ ಪ್ರೊಸೇನ್ ಜಿತ್ ಮುಖರ್ಜಿ ಹಾಗೂ ವಕೀಲರ ಸಂಘದ ಬಳಿ ಕ್ಷಮೆಯಾಚಿಸಬೇಕು. ಅಲ್ಲಿಯವರೆಗೂ ಅವರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವುದಾಗಿ ವಕೀಲರ ಸಂಘ ಹೇಳಿದೆ.
ವರದಿ : ಲಾಗೈಡ್ ಮೈಸೂರು